ಕರಿಜೇಡ : ತೆರಿಡೈಯಿಡೀ ಕುಟುಂಬದ ಲ್ಯಾಟ್ರೊಡೆಕ್ಟೆಸ್ ಜಾತಿಯ ಜೇಡ. ಪ್ರೌಢ ಹೆಣ್ಣು ಜೇಡ ಸು.ಳಿ'' ಉದ್ದವಾಗಿದೆ. ಉದರ ದುಂಡಾಗಿ ದೇಹ ಮಿರುಗುವ ಕಪ್ಪು ಬಣ್ಣದಿಂದ ಕೂಡಿದೆ. ತಳಭಾಗದಲ್ಲಿ ಕಡು ಗೆಂಪು ಬಣ್ಣದ ಬುಡುಬುಡುಕೆ ಆಕಾರದ ಗುರುತಿದೆ. ಕೆಲವು ಅಪ್ರಬುದ್ಧ ಹೆಣ್ಣು ಜೇಡಗಳ ಬೆನ್ನಿನ ಮೇಲೆ ಒಂದು ಸಾಲು ಕೆಂಪು ಬಣ್ಣದ ಚುಕ್ಕೆಗಳಿವೆ ಕೆಲವಕ್ಕೆ ಈ ತರಹ ಚುಕ್ಕೆಗಳು ಇರುವುದಿಲ್ಲ. ಗಂಡು ಜೇಡ ಹೆಣ್ಣಿಗಿಂತ ಚಿಕ್ಕದು. ಇದರಲ್ಲೂ ಉದರದ ತಳ ಭಾಗದಲ್ಲಿ ಬುಡುಬುಡಕ್ಕೆ ಆಕಾರದ ಗುರುತಿದೆ. ಬೆನ್ನಿನ ಮೇಲೆ ವಿವಿಧ ಮಾದರಿಯ ಕೆಂಪು ಚುಕ್ಕೆಗಳೂ ಇವುಗಳ ಪಾಶರ್ವ್‌ದಲ್ಲಿ ಬಿಳಿಯ ಗೆರೆಗಳೂ ಇವೆ.

ಸಂಯುಕ್ತ ಸಂಸ್ಥಾನಗಳ ಸಮಶೀತೋಷ್ಣ ವಲಯದ ಭಾಗಗಳಲ್ಲಿ ಇದರ ಮರಿಗಳು ಕೋಶಾವಸ್ಥೆ ಘಟ್ಟವನ್ನು ಚಳಿಗಾಲದಲ್ಲಿ ಕಳೆದು, ವಸಂತ ಕಾಲದಲ್ಲಿ ಹೊರಕಾಣಿಸಿಕೊಳ್ಳುತ್ತವೆ. ಪ್ರೌಢ ಜೇಡಗಳು ಏಪ್ರಿಲ್ ತಿಂಗಳುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅದರೆ ಗಂಡು ಜೇಡಗಳು ಕಣ್ಣಿಗೆ ಬೀಳುವುದು ಅಪರೂಪ.

ಗಂಡುಜೇಡ ಏಕಾಂಗಿಯಾಗಿ ಬಲೆಯಲ್ಲಿ ಕುಳಿತು ರೇತಸ್ಸನ್ನು ಸುರಿಸಿ ಎರಡನೆಯ ಉಪಾಂಗವಾದ ಪ್ಯಾಲ್ಟುಗಳಲ್ಲಿನ ಒಂದು ಚೀಲದಲ್ಲಿ ಶೇಖರಿಸಿ ಸಂಭೋಗ ಕಾಲದಲ್ಲಿ ಇದನ್ನು ಒಂದು ಪ್ಯಾಲ್ಟಿನ ಮೂಲಕ ಹೆಣ್ಣು ಜೇಡದ ಜನನೇಂದ್ರಿಯದ ದ್ವಾರದ ಒಳಗೆ ತಳ್ಳುವುದು. ಸಂಭೋಗವಾದ ಅನಂತರ ಹೆಣ್ಣು ಜೇಡ ಗಂಡುಜೇಡವನ್ನು ತಿಂದುಬಿಡುತ್ತದೆ! ಹೆಣ್ಣು ಗರ್ಭಧರಿಸಿದ ಮೇಲೆ 250-750 ಮೊಟ್ಟೆಗಳನ್ನು 0-5" ಅಗಲವುಳ್ಳ ರೇಷ್ಮೆಯಂಥ ಮೃದುವಾದ ಕೋಶದಲ್ಲಿ ಇಟ್ಟು ರಕ್ಷಿಸುತ್ತದೆ. ಈ ಭ್ರೂಣಕೋಶಗಳನ್ನು ಜುಲೈ-ಸೆಪ್ಟೆಂಬರ್ ತಿಂಗಳುಗಳಲ್ಲಿ ಕಾಣಬಹುದು. ಮರಿಗಳು 14-30 ದಿನಗಳ ವರೆಗೆ ಈ ಕೋಶಗಳೊಳಗೇ ಬೆಳೆದು ಒಂದು ಬಾರಿ ಪೊರೆಬಿಟ್ಟು ಅನಂತರ ಹೊರಬರುತ್ತವೆ. ಪ್ರೌಢಾವಸ್ಥೆ ಹೊಂದ ಬೇಕಾದರೆ ಗಂಡುಮರಿ 4-7 ಬಾರಿಯೂ ಹೆಣ್ಣು ಮರಿ 2-9 ಸಲವೂ ಪೊರೆ ಕಳಚುತ್ತದೆ. ಇವು ಪ್ರೌಢಾವಸ್ಥೆಗೆ ಬಂದ ಅನಂತರ ಕೆಲವು ತಿಂಗಳುಗಳಿಂದ ಒಂದೂವರೆ ವರ್ಷಗಳವರೆಗೆ ಜೀವಿಸಿರಬಲ್ಲವು. ಕರಿಜೇಡಗಳು ಮರದ ತೊಗಟೆಯ ಒಳಭಾಗ, ಸಂದುಗಳಲ್ಲಿ ಅಥವಾ ಪೊಟರೆಗಳಲ್ಲಿ ರೇಷ್ಮೆಯಂಥ ಸೂಕ್ಷ್ಮವಾದ ದಾರದಿಂದ ದೃಢವಾದ ಬಲೆಯನ್ನು ನೇಯುತ್ತವೆ. ಇತರ ಕೀಟಗಳು ಬಲೆಯೊಳಗೆ ಸಿಕ್ಕಿಕೊಂಡಾಗ ಅವುಗಳನ್ನು ಹಿಡಿದು ರಂಧ್ರಗಳನ್ನು ಮಾಡಿ, ಮೈ ಒಳಗಿರುವ ರಸವನ್ನು ಹೀರುತ್ತವೆ. ಆದರೆ ಕಣಜಗಳೂ ಇತರ ಕೀಟಭಕ್ಷಕಗಳೂ ಜೇಡಗಳ ಮರಿಗಳನ್ನು ತಿಂದು ಹಾಕುತ್ತವೆ.

ಇತರ ಜೇಡಗಳಿಗೆ ಇರುವಂತೆ ಕರೀಜೇಡಕ್ಕೂ ವಿಷಗ್ರಂಥಿಗಳೂ ಅದನ್ನು ದೇಹ ದೊಳಕ್ಕೆ ಹೊಗಿಸುವ ಅಂಗಗಳೂ ಇವೆ. ಇದು ಆತ್ಮರಕ್ಷಣೆಯ ಸಾಧನ. ಕರಿಜೇಡ ಒಮ್ಮೊಮ್ಮೆ ಮನುಷ್ಯನನ್ನು ಕಡಿಯುವುದು ಉಂಟು. ಆಗ ವಿಷದ ಪರಿಣಾಮವಾಗಿ ಮೈನೋವು, ವಾಂತಿ, ವಪೆಯ ಅಸ್ವಸ್ಥತೆ ಇವೆಲ್ಲ ಕಾಣಿಸಿಕೊಳ್ಳುತ್ತವೆ. ಮೂರು ನಾಲ್ಕು ದಿನಗಳವರಗೂ ಈ ನೋವು ಇರುತ್ತದೆ. ಆದರೆ ಸಾವು ಬಹಳ ಅಪರೂಪ.
ಎಚ್. ಲೆವಿ ಎಂಬ ವಿಜ್ಞಾನಿ ಲ್ಯಾಟ್ರೋಡೆಕ್ಟಸ್, ಜಾತಿಯಲ್ಲಿ ಆಫ್ರಿಕದ ಲ್ಯಾ ಜೊಮೆಟ್ರಿಕಸ್, ಅಮೆರಿಕದ ಲ್ಯಾ. ಕುರಸವಿಯೆನ್ನಸ್, ಯೆಮನಿನ ಲ್ಯಾ. ಹಿಸ್ಟ್ರಿಕ್ಸ್‌, ಇರಾನಿನ ಲ್ಯಾ. ದಹ್ಲಿ,  ಉತ್ತರ ಆಫ್ರಿಕದ ಲ್ಯಾ ಪ್ಯಾಲಿಡಸ್ ಮತ್ತು ಪ್ರಪಂಚದ ಇತರ ಉಷ್ಣವಲಯದಲ್ಲಿ ಜೀವಿಸುವ ಲ್ಯಾ. ಮ್ಯಾಕ್ಟನ್ಸ್‌ ಪ್ರಭೇದಗಳನ್ನು ವಿವರಿಸಿದ್ದಾನೆ.	(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ